ನಿಗಮನ -
	ಯಾವುದಾದರೂ ತಾರ್ಕಿಕ ವಾಕ್ಯವನ್ನು ಗೃಹೀತವಾಕ್ಯವನ್ನಾಗಿಟ್ಟುಕೊಂಡು ಅದರ ಆಧಾರದ ಮೇಲೆ ಬೇರೆ ಯಾವುದಾದರೂ ತಾರ್ಕಿಕವಾಕ್ಯವನ್ನು ತಾರ್ಕಿಕ ನಿಯಮಗಳಿಗನುಗುಣವಾಗಿ ಅನುಮಿತಿಯನ್ನಾಗಿ ಪಡೆಯುವ ಕ್ರಮ (ಡಿಡಕ್ಷನ್). ಕ್ರಮವನ್ನು ನಿರ್ದಿಷ್ಟವಾಗಿ ರೂಪಿಸಿದವ ಗ್ರೀಕ್ ತತ್ತ್ವಶಾಸ್ತ್ರಜ್ಞ ಅರಿಸ್ಟಾಟಲ್. ಆದ್ದರಿಂದಲೇ ಅವನು ಇಂದಿಗೂ ನಿಗಮನತರ್ಕಶಾಸ್ತ್ರದ ಜನಕನೆಂದು ಹೆಸರುವಾಸಿಯಾಗಿದ್ದಾನೆ. ನಿಗಮನದ ವಿಧಾನಗಳು ಮತ್ತು ಅದರಲ್ಲಿ ಅನುಸರಿಸಬೇಕಾದ ನಿಯಮಗಳನ್ನು ಕುರಿತು ದೀರ್ಘವಾದ ನಿರೂಪಣೆಯನ್ನು ಆತನ ತರ್ಕಶಾಸ್ತ್ರದಲ್ಲಿ ಕಾಣಬಹುದು.

	ನಿಗಮತರ್ಕಶಾಸ್ತ್ರದ ಮುಖ್ಯ ಉದ್ದೇಶ ಪ್ರಪಂಚದಲ್ಲಿನ ವಸ್ತು ಅಥವಾ ವ್ಯಕ್ತಿಗಳನ್ನು ಕುರಿತು ವಿವರಿಸುವುದಲ್ಲ; ಅವನ್ನು ಕುರಿತ ನಮ್ಮ ಆಲೋಚನಾಕ್ರಮವನ್ನು ವಿಶ್ಲೇಷಿಸುವುದು, ಸರಿಯಾದ ಆಲೋಚನಾಕ್ರಮದ ನಿಯಮಗಳನ್ನು ನಿಗದಿಪಡಿಸುವುದು, ಮತ್ತು ಅವನ್ನು ಬಳಸಿ ಸರಿ ಮತ್ತು ತಪ್ಪಾದ ವಾದಗಳನ್ನು ಸಕಾರಣವಾಗಿ ನಿರೂಪಿಸುವುದು. ಆದ್ದರಿಂದಲೇ ನಿಗಮನತರ್ಕಶಾಸ್ತ್ರ  ರೂಪ-ಸಾಪೇಕ್ಷವಾದವೆಂದೂ (ಫಾರ್ಮಲ್ ಲಾಜಿಕ್) ವಸ್ತು-ಸಾಪೇಕ್ಷವಾದ (ಮಟೀರಿಯಲ್ ಲಾಜಿಕ್) ಅಲ್ಲವೆಂದೂ ಹೇಳುವ ವಾಡಿಕೆ.

	ನಿಗಮನ ಶಾಸ್ತ್ರದ ತಳಹದಿ ತಾರ್ಕಿಕ ವಾಕ್ಯಗಳು. ಇವನ್ನು ಅರಿಸ್ಟಾಟಲ್ ಮುಖ್ಯವಾಗಿ ಮೂರು ವಿಧವಾಗಿ ವಿಂಗಡಿಸಿದ್ದಾನೆ: 1. ನಿರೌಪಾಧಿಕ ತಾರ್ಕಿಕ ವಾಕ್ಯಗಳು (ಕ್ಯಾಟಗಾರಿಕಲ್ ಪ್ರಪೊಸಿಷನ್ಸ್). ಸರಳವಾದ ನಿಸ್ಸಂಶಯವಾದ ಯಾವ ಉಪಾಧಿಯಿಂದಲೂ ಕೂಡಿರದ ಹೇಳಿಕೆಗಳು; 2. ಔಷಧಿಕ ತಾರ್ಕಿಕ ವಾಕ್ಯಗಳು (ಹೈಪೊತೆಟಿಕಲ್ ಪ್ರಪೊಸಿಷನ್ಸ್). ಉಪಾಧಿಯಿಂದ ಕೂಡಿದ ಹೇಳಿಕೆಗಳು; 3. ಪರ್ಯಾಯಾತ್ಮಕವಾದ ತಾರ್ಕಿಕ ವಾಕ್ಯಗಳು (ಡಿಸ್‍ಜಂಕ್ಟಿವ್ ಪ್ರಪೊಸಿಷನ್ಸ್) ಪರಸ್ಪರ ಬೇರೆಯಾಗಿರುವ ವಿಷಯಗಳಲ್ಲಿ ಒಂದರ ಅಸ್ತಿತ್ವವನ್ನು ಪರ್ಯಾಯಾ ತ್ಮಕವಾಗಿ ಹೇಳುವ ವಾಕ್ಯಗಳು.

	ನಿರೌಪಾಧಿಕ ತಾರ್ಕಿಕ ವಾಕ್ಯದ ಮುಖ್ಯ ಅಂಗಗಳು ಉದ್ದೇಶಪದ (ಸಬ್‍ಜೆಕ್ಟ್) ಮತ್ತು ವಿಧೇಯ ಪದ (ಪ್ರೆಡಿಕೇಟ್). ನಾವು ಏನನ್ನು ಕುರಿತು ಹೇಳುತ್ತೇವೆಂಬುದನ್ನು ಸೂಚಿಸುವುದೇ ಉದ್ದೇಶಪದ; ಅದನ್ನು ಕುರಿತು ನಾವು ಏನು ಹೇಳುತ್ತೇವೆ ಎಂಬುದನ್ನು ಸೂಚಿಸುವುದೇ ವಿಧೇಯಪದ. ಇವೆರಡನ್ನೂ ಜೋಡಿಸುವ ಪದಕೆ ಸಂಯೋಗಿದ ಪದವೆಂದು (ಕ್ಯಾಪುಲ) ಹೆಸರು. ತಾರ್ಕಿಕ ವಾಕ್ಯದಲ್ಲಿ ಸಂಯೋಗಿಕ ಪದ ಯಾವಾಗಲೂ ವರ್ತಮಾನ ಕಾಲದಲ್ಲಿಯೇ ಇರಬೇಕು. ಇದಕ್ಕೆ ಕಾರಣ, ಮೇಲೆ ಹೇಳಿದಂತೆ, ನಿಗಮನ ತರ್ಕಶಾಸ್ತ್ರವೆಂಬುದು ವಸ್ತು-ಸಾಪೇಕ್ಷವಾದ ಶಾಸ್ತ್ರವಲ್ಲ; ಅದು ಕೇವಲ ಆಲೋಚನೆಯ ರೂಪ-ಸಾಪೇಕ್ಷಶಾಸ್ತ್ರವಾಗಿರುವುದರಿಂದ, ಅದಕ್ಕೆ ಭೂತ ಭವಿಷ್ಯತ್ತುಗಳ ನಿಯಮ ಅನ್ವಯವಾಗುವುದಿಲ್ಲ. ಎಂದರೆ ಮನುಷ್ಯನ ಆಲೋಚನೆ ಚಿರನೂತನ, ಅದು ನಡೆಯುತ್ತಿರುವುದು ಯಾವಾಗಲೂ ವರ್ತಮಾನದಲ್ಲಿಯೇ.

	ಪರಿಮಾಣ ಮತ್ತು ಗುಣ-ಇವು ಪ್ರತಿಯೊಂದು ನಿರೌಪಾಧಿಕ ತಾರ್ಕಿಕ ವಾಕ್ಯದ ಎರಡು ಲಕ್ಷಣಗಳು. ಪರಿಮಾಣ ಉದ್ದೇಶಪದಕ್ಕೆ ಅನ್ವಯಿಸುತ್ತದೆ, ಎಂದರೆ, ವಿಧೇಯಪದ ಉದ್ದೇಶಪದದ ಎಷ್ಟು ಅಂಶಕ್ಕೆ ಅನ್ವಯಿಸುತ್ತದೆಂಬುದನ್ನು ಅದು ಸೂಚಿಸುತ್ತದೆ. ವಿಧೇಯಪದ ಉದ್ದೇಶಪದದೊಂದಿಗೆ ಯಾವ ರೀತಿಯಾದ ಸಂಬಂಧವನ್ನು ಹೊಂದಿದೆ (ಭಾವಾತ್ಮಕವೇ ನಿಷೇಧಾತ್ಮಕವೇ) ಎನ್ನುವುದನ್ನು ತಾರ್ಕಿಕ ವಾಕ್ಯದ ಗುಣ ಸೂಚಿಸುತ್ತದೆ. ಈ ರೀತಿ ಒಟ್ಟಿನಲ್ಲಿ ತಾರ್ಕಿಕ ವಾಕ್ಯದಲ್ಲಿ ನಾಲ್ಕು ಭಾಗಗಳನ್ನು ಗುರುತಿಸಬಹುದು. ಅವು ಪರಿಮಾಣಪದ, ಉದ್ದೇಶಪದ, ಸಂಯೋಗಿಕಪದ ಮತ್ತು ವಿಧೇಯಪದ.

	ಪರಿಮಾಣ ಮತ್ತು ಗುಣಗಳ ಆಧಾರದ ಮೇಲೆ ನಿರೌಪಾಧಿಕ ತಾರ್ಕಿಕ ವಾಕ್ಯಗಳು ನಾಲ್ಕು ವಿಧವಾಗಿ ವಿಭಜನೆ ಹೊಂದುತ್ತವೆ:

ಪೂರ್ಣ ವ್ಯಾಪಕ, ಭಾವಾತ್ಮಕ ತಾರ್ಕಿಕ ವಾಕ್ಯಗಳು. ಉದಾ: ಎಲ್ಲ ಮಾನವರೂ ಮತ್ರ್ಯರು.
ಪೂರ್ಣ ವ್ಯಾಪಕ, ನಿಷೇಧಾತ್ಮಕ ತಾರ್ಕಿಕ ವಾಕ್ಯಗಳು. ಉದಾ: ಯಾವ ಮಾನವನೂ ಮತ್ರ್ಯನಲ್ಲ.
ಅಪೂರ್ಣ ವ್ಯಾಪಕ (ಅವ್ಯಾಪಕ), ಭಾವಾತ್ಮಕ ತಾರ್ಕಿಕ ವಾಕ್ಯಗಳು. ಉದಾ: ಕೆಲವು ಮಾನವರು ಮತ್ರ್ಯರು.
ಅಪೂರ್ಣವ್ಯಾಪಕ (ಅವ್ಯಾಪಕ). ನಿಷೇಧಾತ್ಮಕ ತಾರ್ಕಿಕ ವಾಕ್ಯಗಳು. ಉದಾ: ಕೆಲವು ಮಾನವರು ಮತ್ರ್ಯರಲ್ಲ.

	ಈ ನಾಲ್ಕು ವಿಧಗಳನ್ನು ಅನುಕ್ರಮವಾಗಿ ಂ ಇ I ಔ  ಎಂಬ ಸಂಕೇತಗಳಿಂದ ಸೂಚಿಸುವುದು ಪಾಶ್ಚಾತ್ಯ ತರ್ಕಶಾಸ್ತ್ರದಲ್ಲಿ ಸಂಪ್ರದಾಯ. ಅದೇ ರೀತಿಯಲ್ಲಿಯೇ ಉದ್ದೇಶಪದವನ್ನು S ಎಂಬ ಸಂಕೇತದಿಂದಲೂ ವಿಧೇಯ ಪದವನ್ನು P ಎಂಬ ಸಂಕೇತದಿಂದಲೂ ಸೂಚಿಸುವುದು ವಾಡಿಕೆ. 

	ಆದ್ದರಿಂದ ಮೇಲಿನ ನಾಲ್ಕು ವಿಧವಾದ ನಿರೌಪಾಧಿಕ ತಾರ್ಕಿಕ ವಾಕ್ಯಗಳನ್ನು ಅನುಕ್ರಮವಾಗಿ SಂP SಇP SIP SಔP ಎಂಬುದಾಗಿ ವ್ಯಕ್ತಪಡಿಸಬಹುದು. ಇವುಗಳಲ್ಲಿ S ಅಕ್ಷರ ಉದ್ದೇಶ್ಶಪದವನ್ನೂ P ಅಕ್ಷರ ವಿಧೇಯಪದವನ್ನೂ ಎರಡಕ್ಕೂ ಮಧ್ಯದಲ್ಲಿನ ಅಕ್ಷರ ತಾರ್ಕಿಕವಾಕ್ಯದ ಪರಿಮಾಣ ಮತ್ತು ಗುಣಗಳನ್ನೂ ಸೂಚಿಸುತ್ತದೆ.

	ಈ ನಾಲ್ಕು ವಿಧವಾದ ತಾರ್ಕಿಕ ವಾಕ್ಯಗಳಲ್ಲಿ ಪ್ರತಿಯೊಂದರಲ್ಲಿಯೂ ಇರುವ ಉದ್ದೇಶಪದ ಮತ್ತು ವಿಧೇಯಪದಗಳು ವ್ಯಾಪಕವೇ ಅವ್ಯಾಪಕವೇ ಎಂದು ನಿರ್ಧರಿಸುವುದು ಆವಶ್ಯಕ.

ಚಿತ್ರ-1

ಈ ರೀತಿಯಾದ ವ್ಯಾಪಕತ್ವ (ಡಿಸ್ಟ್ರಿಬ್ಯೂಷನ್) ನಿರ್ಣಯ ನಿಗಮನ ತರ್ಕಶಾಸ್ತ್ರಕ್ಕೆ ಅಡಿಪಾಯವಿದ್ದಂತೆ; ನಿಗಮನದ ನಿಬಂಧನೆಗಳೆಲ್ಲವೂ ಸಾಧಾರಣವಾಗಿ ಪದಗಳ ವ್ಯಾಪಕತ್ವದ ಮೇಲೆ ಅವಲಂಬಿತವಾಗಿರುತ್ತವೆ. ಂ ತಾರ್ಕಿಕ ವಾಕ್ಯದಲ್ಲಿ ಉದ್ದೇಶಪದ ವ್ಯಾಪಕ ಮತ್ತು ವಿಧೇಯಪದ ಆವ್ಯಾಪಕ; ಇ ವಾಕ್ಯದಲ್ಲಿ ಎರಡು ಪದಗಳು ವ್ಯಾಪಕ; I ತಾರ್ಕಿಕ ವಾಕ್ಯಗಳಲ್ಲಿ ಯಾವ ಪದವೂ ವ್ಯಾಪಕವಲ್ಲ; ಔ ತಾರ್ಕಿಕ ವಾಕ್ಯದಲ್ಲಿ ಉದ್ದೇಶಪದ ಅವ್ಯಾಪಕ ಮತ್ತು ವಿಧೇಯಪದ ವ್ಯಾಪಕಎಂದರೆ ಪೂರ್ಣ ವ್ಯಾಪಕ ತಾರ್ಕಿಕ ವಾಕ್ಯಗಳಲ್ಲಿ (ಂ ಮತ್ತು ಇ)  ಉದ್ದೇಶಪದ ವ್ಯಾಪಕವೆಂದೂ ಅಪೂರ್ಣವ್ಯಾಪಕ ತಾರ್ಕಿಕ ವಾಕ್ಯಗಳಲ್ಲಿ (I ಮತ್ತು ಔ) ಉದ್ದೇಶ ಪದ ಅವ್ಯಾಪಕವೆಂದೂ ನಿಷೇಧಾತ್ಮಕ ವಾಕ್ಯಗಳಲ್ಲಿ (ಇ ಮತ್ತು ಔ) ವಿಧೇಯಪದ ವ್ಯಾಪಕವೆಂದೂ ಭಾವಾತ್ಮಕ ತಾರ್ಕಿಕ ವಾಕ್ಯಗಳಲ್ಲಿ (ಂ ಮತ್ತು I) ವಿಧೇಯಪದ ಅವ್ಯಾಪಕವೆಂದೂ ಹೇಳಿದಂತಾಯಿತು.

	ಒಂದೇ ರೀತಿಯಾದ ಉದ್ದೇಶಪದ ಮತ್ತು ವಿಧೇಯಪದಗಳನ್ನೊಳಗೊಂಡ ಂ ಇ I ಔ ತಾರ್ಕಿಕ ವಾಕ್ಯಗಳ ಪರಸ್ಪರ ಸತ್ಯಾಸತ್ಯ ಸಂಬಂಧವನ್ನು ಸಾಂಪ್ರದಾಯಿಕ ತರ್ಕಶಾಸ್ತ್ರದಲ್ಲಿ ಒಂದು ಚೌಕಟ್ಟಿನ ರೂಪದಲ್ಲಿ ತೋರಿಸಲಾಗಿದೆ. ಇದಕ್ಕೆ ವಿರೋಧ ಸಂಬಂಧದ ಚೌಕಟ್ಟು (ಸ್ಕ್ವೇರ್ ಆಫ್ ಅಪೊಸಿಷನ್) ಎಂದು ಹೆಸರು.

	ನಿಗಮನ ಅನುಮಾನದಲ್ಲಿ ಎರಡು ವಿಧ: ನೇರ ಅನುಮಾನ (ಇಮೀಡಿಯೆಟ್ ಇನ್ಫರೆನ್ಸ್) ಮತ್ತು ಮಾಧ್ಯಮಾನುವರ್ತಿ ಅನುಮಾನ (ಮೀಡಿಯೆಟ್ ಇನ್ಫರೆನ್ಸ್). ಯಾವುದಾದರೊಂದು ಗೃಹೀತವಾಕ್ಯದಿಂದ ಅದರಲ್ಲಿ ಅಡಗಿರುವ ಮತ್ತೊಂದು ವಾಕ್ಯವನ್ನು ಅಭಿವ್ಯಕ್ತಪಡಿಸುವ ತಾರ್ಕಿಕ ಕ್ರಮಕ್ಕೆ ನೇರ ಅನುಮಾನವೆಂದು ಹೆಸರು. ಎರಡು ಗೃಹೀತ ವಾಕ್ಯಗಳಿದ್ದು ಅವುಗಳಿಗೆ ಮಧ್ಯಮ ಪದ (ಮಿಡ್ಲ್‍ಟರ್ಮ್) ಒಂದಿದ್ದರೆ ಅದರ ಮಾಧ್ಯಮದಿಂದ ಮೂರನೆಯ ವಾಕ್ಯವನ್ನು ಅನುಮಿತಿಯಾಗಿ ಪಡೆಯುವ ತಾರ್ಕಿಕ ಕ್ರಮಕ್ಕೆ ಮಾಧ್ಯಮಾನುವರ್ತಿ ಅನುಮಾನ ಅಥವಾ ಅವಯವ ವಾಕ್ಯವೆಂದು ಹೆಸರು.

	ನೇರ ಅನುಮಾನದಲ್ಲಿ ಎರಡು ವಿಧ: ಪರಿವರ್ತನೆ (ಕನ್ವರ್ಷನ್) ಮತ್ತು ಪ್ರತಿವರ್ತನೆ (ಅಬ್‍ವರ್ಷನ್). ಈ ಎರಡೂ ವಿಧಗಳು ನಾವು ಅನುಸರಿಸುವ ತಾರ್ಕಿಕ ಕ್ರಮವನ್ನು ಅವಲಂಬಿಸಿರುತ್ತವೆ.

	ಪರಿವರ್ತನೆಯಲ್ಲಿ ಗೃಹೀತವಾಕ್ಯದ ಅರ್ಥವನ್ನು ಅದರ ವಿಧೇಯಪದದ ದೃಷ್ಟಿಯಿಂದ ಅನುಮಿತಿ ಅಥವಾ ನಿರ್ಣಯವಾಕ್ಯದಲ್ಲಿ (ಕನ್‍ಕ್ಲೂಷನ್) ವ್ಯಕ್ತಪಡಿಸುತ್ತೇವೆ. ಎಂದರೆ ಪರಿವರ್ತನೆಯಲ್ಲಿ ಗೃಹೀತವಾಕ್ಯದ ವಿಧೇಯಪದ ನಿರ್ಣಯವಾಕ್ಯದ ಉದ್ದೇಶಪದವಾಗಿಯೂ ಗೃಹೀತವಾಕ್ಯದ ಉದ್ದೇಶಪದ ನಿರ್ಣಯವಾಕ್ಯದ ವಿಧೇಯಪದವಾಗಿಯೂ ಮಾರ್ಪಡುತ್ತದೆ. ಆದರೆ ಪರಿವರ್ತನೆಯಲ್ಲಿ ಗೃಹೀತವಾಕ್ಯದ ಮೂಲ ಅರ್ಥ ಬದಲಾಗಕೂಡದು. ಪರಿವರ್ತನೆಯಲ್ಲಿ ಗೃಹೀತವಾಕ್ಯವನ್ನು ಪರಿವರ್ತನೀಯವೆಂದೂ (ಕನ್‍ವರ್ಟೆಂಡ್), ಅದರಿಂದ ನಾವು ಪಡೆಯುವ ನಿರ್ಣಯ ವಾಕ್ಯವನ್ನು ಪರಿವತ್ರ್ಯವೆಂದೂ (ಕಾನ್‍ವರ್ಸ್) ಕರೆಯಬಹುದು.

	ಪರಿವರ್ತನೆ ತಪ್ಪಿಲ್ಲದೆ ನಡೆಯಬೇಕಾದರೆ ಎರಡು ತಾರ್ಕಿಕ ನಿಯಮಗಳನ್ನು ಪಾಲಿಸಬೇಕಾಗುವುದು.
ಗೃಹೀತವಾಕ್ಯದ ಗುಣವನ್ನು ನಿರ್ಣಯವಾಕ್ಯದಲ್ಲಿ ಬದಲಾಯಿಸಕೂಡದು.
ಗೃಹೀತವಾಕ್ಯದಲ್ಲಿ ಅವ್ಯಾಪಕವಾಗಿರುವ ಯಾವ ಪದವೂ ನಿರ್ಣಯ ವಾಕ್ಯದಲ್ಲಿ ವ್ಯಾಪಕವಾಗಕೂಡದು.

	ಈ ನಿಯಮಗಳನ್ನು ಅನುಸರಿಸಿದಲ್ಲಿ, ಎಲ್ಲ ಮಾನವರೂ ಮತ್ರ್ಯರು (SಂP) ಎಂಬ ತಾರ್ಕಿಕವಾಕ್ಯ ಕೆಲವು ಮತ್ರ್ಯಜೀವಿಗಳು ಮಾನವರು (PIS) ಎಂಬುದಾಗಿಯೂ ಯಾವ ಮಾನವನೂ ಮತ್ರ್ಯನಲ್ಲ (SಇP) ಎಂಬ ತಾರ್ಕಿಕ ವಾಕ್ಯ ಯಾವ ಮತ್ರ್ಯಜೀವಿಯೂ ಮಾನವನಲ್ಲ (PಇS) ಎಂಬುದಾಗಿಯೂ ಕೆಲವು ಮಾನವರು ಮತ್ರ್ಯರು (SIP) ಎಂಬ ತಾರ್ಕಿಕವಾಕ್ಯ ಕೆಲವುಮತ್ರ್ಯಜೀವಿಗಳು ಮಾನವರು (PIS) ಎಂಬುದಾಗಿಯೂ ಪರಿವರ್ತಿತವಾಗುತ್ತದೆ. SಔP ತಾರ್ಕಿಕವಾಕ್ಯವನ್ನು ಪರಿವರ್ತಿಸಲಾಗುವುದಿಲ್ಲ. ಕಾರಣ, ಆ ರೀತಿಯಾದ ಪರಿವರ್ತನೆ ಮೇಲೆ ಹೇಳಿದ ಎರಡನೆಯ ನಿಯಮಕ್ಕೆ ವಿರುದ್ಧವಾಗುತ್ತದೆ.

	ಪ್ರತಿವರ್ತನೆಯಲ್ಲಿ ಪ್ರತಿವರ್ತಿಸಲ್ಪಡಬೇಕಾದ ಗೃಹೀತವಾಕ್ಯಕ್ಕೆ ಪ್ರತಿವರ್ತನೀಯ (ಅಬ್‍ವರ್‍ಟೆಂಡ್) ಎಂದು ಹೆಸರು; ಅದನ್ನು ಪ್ರತಿವರ್ತಿಸಿ ನಾವು ಪಡೆಯುವ ನಿರ್ಣಯವಾಕ್ಯಕ್ಕೆ ಪ್ರತಿವತ್ರ್ಯ (ಅಬ್‍ವರ್ಸ್) ಎಂದು ಹೆಸರು. ಪ್ರತಿವರ್ತನೆಯಲ್ಲಿ ಪ್ರತಿವತ್ರ್ಯದ ವಿಧೇಯಪದ ಪ್ರತಿವರ್ತನೀಯದ ವಿಧೇಯಪದದ ವಿರುದ್ಧ (ಕಾಂಟ್ರಡಿಕ್ಟರಿ) ಪದವಾಗಿರುತ್ತದೆ ಮತ್ತು ಪ್ರತಿವರ್ತನೀಯದ ಗುಣ ಪ್ರತಿವತ್ರ್ಯದಲ್ಲಿ ಮಾರ್ಪಡುತ್ತದೆ. 

	ಪರಿವರ್ತನೆಯಂತೆಯೇ ಪ್ರತಿವರ್ತನೆಗೂ ಎರಡು ನಿಯಮಗಳುಂಟು.
ಪ್ರತಿವರ್ತನೀಯದಲ್ಲಿನ ಉದ್ದೇಶಪದ ಮತ್ತು ವಿಧೇಯಪದಗಳ ಸ್ಥಳಗಳು ಪ್ರತಿವತ್ರ್ಯದಲ್ಲಿ ವ್ಯತ್ಯಾಸವಾಗಕೂಡದು.
ಪ್ರತಿವರ್ತನೀಯದ ಪರಿಮಾಣ ಪ್ರತಿವತ್ರ್ಯದಲ್ಲಿ ಬದಲಾಗಕೂಡದು.

	ಈ ನಿಯಮಗಳಿಗನುಸಾರವಾಗಿ, ಎಲ್ಲ ಮಾನವರೂ ಜ್ಞಾನಿಗಳು (SAP) ಎಂಬ ತಾರ್ಕಿಕವಾಕ್ಯ ಯಾವ ಮಾನವನೂ ಅಜ್ಞಾನಿಯಲ್ಲ (SEP) ಎಂಬುದಾಗಿಯೂ ಯಾವ ಮಾನವನೂ ಜ್ಞಾನಿಯಲ್ಲ (SEP) ಎಂಬ ತಾರ್ಕಿಕವಾಕ್ಯ ಎಲ್ಲ ಮಾನವರೂ ಅಜ್ಞಾನಿಗಳು (SAP) ಎಂಬುದಾಗಿಯೂ ಕೆಲವು ಮಾನವರು ಜ್ಞಾನಿಗಳು (SIP) ಎಂಬ ತಾರ್ಕಿಕವಾಕ್ಯ ಕೆಲವು ಮಾನವರು ಅಜ್ಞಾನಿಗಳಲ್ಲ (SOP) ಎಂಬುದಾಗಿಯೂ ಕೆಲವು ಮಾನವರು ಜ್ಞಾನಿಗಳಲ್ಲ (SOP) ಎಂಬ ತಾರ್ಕಿಕವಾಕ್ಯ ಕೆಲವು ಮಾನವರು ಅಜ್ಞಾನಿಗಳು (SIP) ಎಂಬುದಾಗಿಯೂ ಪ್ರತಿವರ್ತಿತವಾಗುತ್ತದೆ.

	ಪರಿವರ್ತನೆ ಮತ್ತು ಪ್ರತಿವರ್ತನೆಗಳೆರಡನ್ನೂ ಒಂದಾದ ಮೇಲೊಂದರಂತೆ ಮಾಡುತ್ತ ಯಾವುದಾದರೊಂದು ಗೃಹೀತವಾಕ್ಯದಿಂದ ಅದರಲ್ಲಿ ಅಡಗಿರತಕ್ಕ ಅನೇಕ ನಿರ್ಣಯವಾಕ್ಯಗಳನ್ನು ತಾರ್ಕಿಕವಾಗಿ ಪಡೆಯಬಹುದು. ಈ ರೀತಿ ಸರಪಳಿಯಂತೆ ನಿರ್ಣಯವಾಕ್ಯಗಳನ್ನು ಪಡೆಯುವ ಕ್ರಮಕ್ಕೆ ವಿವಕ್ಷಿತ ಅನುಮಾನದ ಸರಪಳಿ (ಇಂಡಕ್ಷನ್ ಸ್ಕೀಮ್) ಎಂದು ಹೆಸರು. ಈ ಕ್ರಮದಲ್ಲಿ A ತಾರ್ಕಿಕ ವಾಕ್ಯದಿಂದ ಏಳು ನಿರ್ಣಯವಾಕ್ಯಗಳನ್ನೂ E ತಾರ್ಕಿಕವಾಕ್ಯದಿಂದ ಏಳು ನಿರ್ಣಯ ವಾಕ್ಯಗಳನ್ನೂ I ತಾರ್ಕಿಕ ವಾಕ್ಯದಿಂದ ಮೂರು ನಿರ್ಣಯವಾಕ್ಯಗಳನ್ನೂ O ತಾರ್ಕಿಕ ವಾಕ್ಯದಿಂದ ಮೂರು ನಿರ್ಣಯ ವಾಕ್ಯಗಳನ್ನೂ ಪಡೆಯಬಹುದು.

	ಮಾಧ್ಯಮಾನುವರ್ತಿ ಅನುಮಾನ ಅಥವಾ ಅವಯವವಾಕ್ಯದಲ್ಲಿ (ಸಿಲೊಜಿಸಂ) ಒಂದು ಮಧ್ಯಮ ಪದವುಳ್ಳ ಎರಡು ಗೃಹೀತವಾಕ್ಯಗಳ ಆಧಾರದ ಮೇಲೆ ಒಂದು ಅನುಮತಿಯನ್ನು ಪಡೆಯುತ್ತೇವೆ. ಅನುಮತಿಯ ಉದ್ದೇಶಪದಕ್ಕೆ ಪಕ್ಷವೆಂದೂ (ಮೈನರ್ ಟರ್ಮ್) ವಿಧೇಯ ಪದಕ್ಕೆ ಸಾಧ್ಯವೆಂದೂ (ಮೇಜರ್ ಟರ್ಮ್) ಹೆಸರು. ಎರಡು ಗೃಹೀತ ವಾಕ್ಯಗಳಲ್ಲಿಯೂ ಸಮಾನವಾಗಿ ಕಂಡುಬರುವ ಪದಕ್ಕೆ ಮಧ್ಯಮ ಪದವೆಂದೂ (ಮಿಡ್ಲ್ ಟರ್ಮ್)ಹೆಸರು. ಮಾಧ್ಯಮಾನುವರ್ತಿ ಅನುಮಾನದಲ್ಲಿ ಮೊದಲನೆಯ ಗೃಹೀತವಾಕ್ಯ ಮಧ್ಯಮ ಪದ ಮತ್ತು ಸಾಧ್ಯಗಳ ಸಂಬಂಧವನ್ನು ವ್ಯಕ್ತಪಡಿಸುತ್ತದೆ; ಎರಡನೆಯ ಗೃಹೀತವಾಕ್ಯ ಪಕ್ಷ ಮತ್ತು ಮಧ್ಯಮ ಪದಗಳ ಸಂಬಂಧಗಳನ್ನು ವ್ಯಕ್ತಪಡಿಸುತ್ತದೆ. ಇವೆರಡರ ಆಧಾರದ ಮೇಲೆ ಅನುಮಿತಿಯಲ್ಲಿ ಪಕ್ಷ ಮತ್ತು ಸಾಧ್ಯಗಳ ನಡುವಣ ಸಂಬಂಧ ವ್ಯಕ್ತವಾಗುತ್ತದೆ. ಸಾಂಪ್ರದಾಯಿಕವಾಗಿ ಬಂದಿರುವ ಉದಾಹರಣೆಯಲ್ಲಿ ಈ ಅಂಶಗಳನ್ನು ಗಮನಿಸಬಹುದು.

	ಎಲ್ಲ ಮಾನವರೂ ಮತ್ರ್ಯರು. ಸಾಕ್ರಟೀಸ್ ಒಬ್ಬ ಮಾನವ. ಆದ್ದರಿಂದ ಸಾಕ್ರಟೀಸ್ ಮತ್ರ್ಯ.

	ಮೇಲಿನ ಅವಯವವಾಕ್ಯದಲ್ಲಿ ಸಾಕ್ರಟೀಸ್ ಎಂಬ ಪದ ಪಕ್ಷ; ಮತ್ರ್ಯ ಎಂಬ ಪದ ಸಾಧ್ಯ; ಮಾನವ ಎಂಬ ಪದ ಮಾಧ್ಯಮಪದ. ಮಧ್ಯಮಪದದ ದೆಸೆಯಿಂದಲೇ ಈ ಅನುಮಾನ ಸಾಧ್ಯವಾಗುವುದರಿಂದ ಈ ತಾರ್ಕಿಕ ಕ್ರಮಕ್ಕೆ ಮಾಧ್ಯಮಾನುವರ್ತಿ ಅನುಮಾನವೆಂಬ ಹೆಸರು ಬಂದಿದೆ.

	ಅರಿಸ್ಟಾಟಲನ ಪ್ರಕಾರ ಮೇಲಿನ ಅನುಮಾನ ಒಂದು ಸಿದ್ಧಾಂತದ ಮೇಲೆ ಅವಲಂಬಿತವಾಗಿದೆ. ಆ ಸಿದ್ದಾಂತವಿದು: ಒಂದು ಜಾತಿ ಅಥವಾ ವರ್ಗಕ್ಕೆಲ್ಲಕ್ಕೂ ಅನ್ವಯಿಸತಕ್ಕ ಒಂದು ಸತ್ಯ ಆ ಜಾತಿ ಅಥವಾ ವರ್ಗದ ಪ್ರತಿವ್ಯಕ್ತಿ ಅಥವಾ ಅಂಶಕ್ಕೂ ಅನ್ವಯಿಸುತ್ತದೆ; ಜಾತಿ ಅಥವಾ ವರ್ಗಕ್ಕೆ ಅನ್ವಯಿಸದ ಸತ್ಯ ಅದರ ಯಾವ ವ್ಯಕ್ತಿ ಅಥವಾ ಅಂಶಕ್ಕೂ ಅನ್ವಯಿಸುವುದಿಲ್ಲ.

	ಅವಯವವಾಕ್ಯ ದೋಷರಹಿತವಾಗಿರಬೇಕಾದರೆ ಅದು ಕೆಲವು ನಿಯಮಗಳಿಗೆ ಅನುಗುಣವಾಗಿರಬೇಕು. ಅರಿಸ್ಟಾಟಲನ ಪ್ರಕಾರ ಆ ನಿಯಮಗಳು ಈ ರೀತಿ ಇವೆ:

ಅವಯವವಾಕ್ಯದಲ್ಲಿ ಮೂರು ತಾರ್ಕಿಕವಾಕ್ಯಗಳು ಮಾತ್ರ ಇರಬೇಕು; ಇವುಗಳ ಪೈಕಿ ಎರಡು ಗೃಹೀತವಾಕ್ಯಗಳು, ಉಳಿದದ್ದು ಅನುಮಿತಿ.

ಅವಯವವಾಕ್ಯದಲ್ಲಿ ಮೂರು ಪದಗಳು ಮಾತ್ರ ಇರಬೇಕು- ಪಕ್ಷ, ಸಾಧ್ಯ ಮತ್ತು ಮಧ್ಯಮ. ಮಧ್ಯಮಪದ ಎರಡು ಗೃಹೀತವಾಕ್ಯಗಳಲ್ಲಿಯೂ ಒಂದೇ ಅರ್ಥದಲ್ಲಿ ಉಪಯೋಗಿಸಲ್ಪಟ್ಟಿರಬೇಕು; ಇಲ್ಲದಿದ್ದರೆ ನಾಲ್ಕು ಪದಗಳ ದೋಷ (ಫ್ಯಾಲಸಿ ಆಫ್ ಫೋರ್ ಟಮ್ರ್ಸ್) ಅಥವಾ ಅನಿರ್ದಿಷ್ಟ ಮಧ್ಯಮ (ಆ್ಯಂಬಿಗ್ಯುಯಸ್ ಮಿಡ್ಲ್) ಎಂಬ ತಾರ್ಕಿಕ ದೋಷ ಉಂಟಾಗುವುದು.

ಮಧ್ಯಮಪದ ಗೃಹೀತವಾಕ್ಯಗಳಲ್ಲೊಂದರಲ್ಲಿಯಾದರೂ ಪೂರ್ಣ ವ್ಯಾಪಕವಾಗಿರಬೇಕು. ಇಲ್ಲದಿದ್ದರೆ ಅವ್ಯಾಪಕ ಮಾಧ್ಯಮ (ಅನ್‍ಡಿಸ್ಟ್ರಿಬ್ಯೂಟೆಡ್ ಮಿಡ್ಲ್) ಎಂಬ ತಾರ್ಕಿಕ ದೋಷ ಉಂಟಾಗುವುದು.
ಗೃಹೀತವಾಕ್ಯಗಳಲ್ಲಿ ಅವ್ಯಾಪಕವಾಗಿರುವ ಯಾವ ಪದವೂ ಅನುಮಿತಿಯಲ್ಲಿ ವ್ಯಾಪಕವಾಗಕೂಡದು. ಸಾಧ್ಯ ಮೊದಲನೆಯ ಗೃಹೀತವಾಕ್ಯದಲ್ಲಿ ಅವ್ಯಾಪಕವಾಗಿದ್ದು ಅನುಮಿತಿಯಲ್ಲಿ ವ್ಯಾಪಕವಾಗಿದ್ದರೆ ದೋಷಪೂರ್ಣ ಸಾಧ್ಯ (ಇಲಿಸಿಟ್ ಮೇಜರ್) ಎಂಬ ತಾರ್ಕಿಕ ದೋಷ ಉಂಟಾಗುವುದು; ಅದೇ ರೀತಿ ಪಕ್ಷ ಎರಡನೆಯ ಗೃಹೀತವಾಕ್ಯದಲ್ಲಿ ಅವ್ಯಾಪಕವಾಗಿದ್ದರು ಅನುಮಿತಿಯಲ್ಲಿ ವ್ಯಾಪಕವಾಗಿದ್ದರೆ ದೋಷಪೂರ್ಣ ಪಕ್ಷ (ಇಲಿಸಿಟ್ ಮೈನರ್) ಎಂಬ ತಾರ್ಕಿಕ ದೋಷ ಉಂಟಾಗುವುದು.

ಎರಡು ನಿಷೇಧಾತ್ಮಕ ಗೃಹೀತವಾಕ್ಯಗಳಿಂದ ಯಾವ ಅನುಮಿತಿಯೂ ಸಾಧ್ಯವಾಗುವುದಿಲ್ಲ.
ಯಾವುದಾದರೊಂದು ಗೃಹೀತವಾಕ್ಯ ನಿಷೇಧಾತ್ಮಕವಾಗಿದ್ದರೆ ಅನುಮಿತಿ ಭಾವಾತ್ಮಕವಾಗಿರಕೂಡದು.
ಎರಡು ಗೃಹೀತವಾಕ್ಯಗಳು ಭಾವಾತ್ಮಕವಾಗಿದ್ದರೆ ಅನುಮಿತಿ ಭಾವಾತ್ಮಕವಾಗಿಯೇ ಇರಬೇಕು.
ಅವ್ಯಾಪಕವಾಗಿರುವ ಎರಡು ಗೃಹೀತವಾಕ್ಯಗಳಿಂದ (ಪರ್ಟಿಕ್ಯುಲರ್ ಪ್ರಪೊಸಿಷನ್ಸ್) ಯಾವ ಅನುಮಿತಿಯೂ ಸಾಧ್ಯವಾಗುವುದಿಲ್ಲ.
ಗೃಹೀತವಾಕ್ಯಗಳಲ್ಲಿ ಒಂದು ಅವ್ಯಾಪಕವಾಗಿದ್ದರೆ ಅನುಮಿತಿಯೂ ಅವ್ಯಾಪಕವಾಗಿರಬೇಕು.

	ಅವಯವ ವಾಕ್ಯದಲ್ಲಿ ಕೆಲವು ವೇಳೆ ಮೂರು ತಾರ್ಕಿಕವಾಕ್ಯಗಳ ಪೈಕಿ ಯಾವುದಾದರೊಂದು ಅವ್ಯಕ್ತವಾಗಿರುವುದೂ ಉಂಟು. ಆ ರೀತಿಯಾದ ಅವಯವದ ವಾಕ್ಯವನ್ನು ಲಘು ಅವಯವವಾಕ್ಯ (ಎಂತಿಮೀಮ್) ಎಂದು ಕರೆಯಬಹುದು. ಮೊದಲನೆಯ ಗೃಹೀತವಾಕ್ಯ ಅವ್ಯಕ್ತವಾಗಿದ್ದರೆ ಅದು ಮೊದಲನೆಯ ದರ್ಜೆಯ ಲಘು ಅವಯವ ವಾಕ್ಯ. ಅನುಮಿತಿ ಅವ್ಯಕ್ತವಾಗಿದ್ದರೆ, ಅದು ಮೂರನೆಯ ದರ್ಜೆಯ ಲಘು ಅವಯವವಾಕ್ಯ.

	ಒಂದಕ್ಕಿಂತಲೂ ಹೆಚ್ಚಿನ ಅವಯವವಾಕ್ಯಗಳನ್ನು ಪೋಣಿಸಿ ತಾರ್ಕಿಕವಾದಗಳನ್ನು ರಚಿಸುವುದೂ ಉಂಟು. ಈ ರೀತಿ ರಚಿತವಾದ ತಾರ್ಕಿಕವಾದವನ್ನು ಸರಪಳಿ ಅವಯವ ವಾಕ್ಯ(ಸೋರೈಟೀಸ್) ಎಂದು ಕರೆಯಬಹುದು.

	ನಿರೌಪಾಧಿಕ ವಾಕ್ಯಗಳನ್ನೊಳಗೊಂಡ ಅವಯವವಾಕ್ಯಗಳಿರುವಂತೆಯೇ ಔಪಾಧಿಕ ವಾಕ್ಯಗಳನ್ನೊಳಗೊಂಡ ಅವಯವವಾಕ್ಯಗಳೂ (ಹೈಪೊತೆಟಿಕಲ್ ಸಿಲೊಜಿಸಮ್ಸ್) ಸಾಧ್ಯ. ಇವುಗಳಲ್ಲಿ ಎರಡು ವಿಧ; ಮೂರು ವಾಕ್ಯಗಳೂ ಔಪಾಧಿಕವಾಗಿದ್ದರೆ ಅದು ಪೂರ್ಣ ಔಪಾಧಿಕ ಅವಯವವಾಕ್ಯ ಎನಿಸುತ್ತದೆ. ಮೊದಲನೆಯ ವಾಕ್ಯ ಔಪಾಧಿಕವಾಗಿದ್ದು ಉಳಿದೆರಡೂ ನಿರೌಪಾಧಿಕವಾಗಿದ್ದರೆ ಅದು ಮಿಶ್ರ ಔಪಾಧಿಕ ಅವಯವ ವಾಕ್ಯ ಎನಿಸುತ್ತದೆ.

	ಮಿಶ್ರ ಔಪಾಧಿಕ ಅವಯವವಾಕ್ಯಕ್ಕೆ ಅನ್ವಯವಾಗುವ ಎರಡು ನಿಯಮಗಳುಂಟು:

ಎರಡನೆಯ ನಿರೌಪಾಧಿಕ ವಾಕ್ಯದಲ್ಲಿ, ಮೊದಲನೆಯ ಔಪಾಧಿಕವಾಕ್ಯದಲ್ಲಿ ಹೇಳಿರುವ ಕಾರಣವನ್ನು (ಆ್ಯಂಟಿಸಿಡೆಂಟ್) ಭಾವಾತ್ಮಕವಾಗಿ ಸ್ಥಿರಪಡಿಸಿ, ಅದರ ಆಧಾರದ ಮೇಲೆ ಅನುಮಿತಿಯಲ್ಲಿ ಮೊದಲನೆಯ ಔಪಾಧಿಕವಾಕ್ಯದಲ್ಲಿ ಹೇಳಿರುವ ಪರಿಣಾಮವನ್ನು (ಕಾನ್‍ಸಿಕ್ವೆಂಟ್) ಭಾವಾತ್ಮಕವಾಗಿ ಸ್ಥಿರಪಡಿಸಬೇಕು. ಈ ರೀತಿ ರಚಿತವಾದ ಮಿಶ್ರ ಔಪಾಧಿಕ ಅವಯವವಾಕ್ಯವನ್ನು ಕಾರಣ ಭಾವಾತ್ಮಕ ಅಥವಾ ಅಂಗೀಕಾರದ ನಿಲುವು (ಮೋಡಸ್ ಪೋನನ್ಸ್) ಎಂದು ಕರೆಯಬಹುದು.

ಎರಡನೆಯ ನಿರೌಪಾಧಿಕ ವಾಕ್ಯದಲ್ಲಿ, ಮೊದಲನೆಯ ಔಪಾಧಿಕವಾಕ್ಯದಲ್ಲಿ ಹೇಳಿರುವ ಪರಿಣಾಮವನ್ನು ನಿಷೇಧಿಸಿ, ಅದರ ಆಧಾರದ ಮೇಲೆ ಅನುಮಿತಿಯಲ್ಲಿ ಮೊದಲನೆಯ ಔಪಾಧಿಕವಾಕ್ಯದಲ್ಲಿನ ಕಾರಣವನ್ನು ನಿಷೇಧಿಸಬೇಕು. ಈ ರೀತಿ ರಚಿತವಾದ ಮಿಶ್ರ ಔಪಾಧಿಕ ಅವಯವವಾಕ್ಯವನ್ನು ಪರಿಣಾಮ ನಿಷೇಧಾತ್ಮಕ ಅಥವಾ ನಿರಾಕರಣೆಯ ನಿಲುವು (ಮೋಡಸ್ ಟೋಲನ್ಸ್) ಎಂದು ಕರೆಯಬಹುದು.

	ಪರ್ಯಾಯಾತ್ಮಕ ಅವಯವವಾಕ್ಯಗಳೂ ಸಾಧ್ಯ. ಇವುಗಳಲ್ಲಿ ಮೊದಲನೆಯ ವಾಕ್ಯ ಪರ್ಯಾಯಾತ್ಮಕವಾಗಿಯೂ ಎರಡನೆಯ ವಾಕ್ಯ ಮತ್ತು ಅನುಮಿತಿ ನಿರೌಪಾಧಿಕವಾಗಿಯೂ ಇರುತ್ತವೆ. ಇವುಗಳಲ್ಲಿ ಎರಡು ವಿಧ;
ಎರಡನೆಯ ನಿರೌಪಾಧಿಕ ವಾಕ್ಯದಲ್ಲಿ ಮೊದಲನೆಯ ಪರ್ಯಾಯಾತ್ಮಕ ವಾಕ್ಯದಲ್ಲಿನ ಯಾವುದಾದರೊಂದು ಪರ್ಯಾಯವನ್ನು ಅಂಗೀಕರಿಸಿ ಅನುಮಿತಿಯಲ್ಲಿ ಮತ್ತೊಂದು ಪರ್ಯಾಯವನ್ನು ನಿರಾಕರಿಸುವುದು ಒಂದು ವಿಧ. ಇದನ್ನು ಅಂಗೀಕಾರ ಮೂಲವಾದ ನಿರಾಕರಣೆಯ ನಿಲುವು (ಮೋಡಸ್ ಪೊನೊಂಡೊ ಟೋಲನ್ಸ್) ಎಂದು ಕರೆಯಬಹುದು.

ಎರಡನೆಯ ನಿರೌಪಾಧಿಕ ವಾಕ್ಯದಲ್ಲಿ ಮೊದಲನೆಯ ಪರ್ಯಾಯಾತ್ಮಕ ವಾಕ್ಯದಲ್ಲಿನ ಯಾವುದಾದರೊಂದು ಪರ್ಯಾಯವನ್ನು ನಿರಾಕರಿಸಿ ಅದರ ಆಧಾರದ ಮೇಲೆ ಅನುಮಿತಿಯಲ್ಲಿ ಮತ್ತೊಂದು ಪರ್ಯಾಯವನ್ನು ಅಂಗೀಕರಿಸುವುದು ಎರಡನೆಯ ವಿಧ. ಇದನ್ನು ನಿರಾಕರಣೆ ಮೂಲವಾದ ಅಂಗೀಕಾರದ ನಿಲುವು (ಮೋಡಸ್ ಟೊಲೆಂಡೊ ಪೋನನ್ಸ್) ಎಂದು ಕರೆಯಬಹುದು.

	ನಿರೌಪಾಧಿಕ ಮತ್ತು ಪರ್ಯಾಯಾತ್ಮಕ ವಾಕ್ಯಗಳೆರಡೂ ಸೇರಿ ನಿಗಮವಾದ ರಚಿತವಾಗವುದುಂಟು. ಈ ರೀತಿಯಾದ ವಾದವನ್ನು ದ್ವೈತವೆಂದು (ಡೈಲೆಮ) ಕರೆಯುತ್ತಾರೆ. ಇದರಲ್ಲಿ ನಾಲ್ಕು ವಿಧಗಳಿವೆ: 1. ಸರಳ ರಚನಾತ್ಮಕ: ಇದರಲ್ಲಿ ಮೊದಲನೆಯ ಗೃಹೀತವಾಕ್ಯ ಎರಡು ಔಪಾಧಿಕ ವಾಕ್ಯಗಳಿಂದ ಕೂಡಿರುತ್ತದೆ ಮತ್ತು ಇವೆರಡರಲ್ಲಿ ಕಾರಣಾಂಗಗಳೂ ಬೇರೆಯಾಗಿದ್ದು ಪರಿಣಾಮಾಂಗ ಅಥವಾ ಕಾರ್ಯಾಂಗ ಒಂದೇ ಆಗಿರುತ್ತದೆ. ಎರಡನೆಯ ಗೃಹೀತವಾಕ್ಯದಲ್ಲಿನ ಕಾರಣಾಂಗಗಳನ್ನು ಅಂಗೀಕರಿಸುತ್ತದೆ. ಅನುಮತಿ ನಿರೌಪಾಧಿಕವಾಗಿ ಮೊದಲನೆಯ ಗೃಹೀತವಾಕ್ಯದ ಪರಿಣಾಮಾಂಗಗಳನ್ನು ಅಂಗೀಕರಿಸುತ್ತದೆ. 2. ಸರಳ ನಿಷೇಧಾತ್ಮಕ: ಇದರಲ್ಲಿ ಮೊದಲನೆಯ ಗೃಹೀತವಾಕ್ಯ ಎರಡು ಔಪಾಧಿಕ್ಯವಾಕ್ಯಗಳಿಂದ ಕೂಡಿರುತ್ತದೆ ಮತ್ತು ಇವೆರಡರಲ್ಲಿ ಕಾರಣಾಂಗ ಒಂದೇ ಆಗಿದ್ದು, ಪರಿಣಾಮಾಂಗಗಳೂ ಬೇರೆಯಾಗಿರುತ್ತವೆ. ಎರಡನೆಯ ಗೃಹೀತವಾಕ್ಯ ಪರ್ಯಾಯಾತ್ಮಕವಾಗಿ ಮೊದಲನೆಯ ಗೃಹೀತವಾಕ್ಯದ ಪರಿಣಾಮಾಂಗಗಳನ್ನು ನಿರಾಕರಿಸುತ್ತದೆ. ಅನುಮಿತಿ ನಿರೌಪಾಧಿಕವಾಗಿ ಮೊದಲನೆಯ ಗೃಹೀತವಾಕ್ಯದಲ್ಲಿನ ಕಾರಣಾಂಗವನ್ನು ನಿರಾಕರಿಸುತ್ತದೆ. 3. ಸಂಕೀರ್ಣ ರಚನಾತ್ಮಕ: ಇದರಲ್ಲಿ ಮೊದಲನೆಯ ಗೃಹೀತವಾಕ್ಯದಲ್ಲಿ ಎರಡು ಔಪಾಧಿಕ ವಾಕ್ಯಗಳಿದ್ದು, ಈ ಎರಡೂ ವಾಕ್ಯಗಳ ಕಾರಣಾಂಗಗಳೂ ಪರಿಣಾಮಾಂಗಗಳೂ ಬೇರೆ ಬೇರೆಯಾಗಿರುತ್ತವೆ. ಎರಡನೆಯ ಗೃಹೀತವಾಕ್ಯ ಪರ್ಯಾಯಾತ್ಮಕವಾಗಿ ಮೊದಲನೆಯ ವಾಕ್ಯದಲ್ಲಿನ ಕಾರಣಾಂಗಗಳನ್ನು ಅಂಗೀಕರಿಸುತ್ತದೆ; ಅನುಮಿತಿ ಮೊದಲನೆಯ ಗೃಹೀತ ವಾಕ್ಯದ ಪರಿಣಾಮಾಂಗಗಳನ್ನು ಪರ್ಯಾಯಾತ್ಮಕವಾಗಿ ಅಂಗೀಕರಿಸುತ್ತದೆ. 4. ಸಂಕೀರ್ಣ ನಿಷೇಧಾತ್ಮಕ: ಇದರಲ್ಲಿ ಮೊದಲನೆಯ ಗೃಹೀತವಾಕ್ಯದಲ್ಲಿ ಎರಡು ಔಪಾಧಿಕವಾಕ್ಯಗಳಿದ್ದು ಅವುಗಳಲ್ಲಿನ ಕಾರಣಾಂಗಗಳೂ ಪರಿಣಾಮಾಂಗಗಳೂ ಬೇರೆ ಬೇರೆಯಾಗಿರುತ್ತವೆ. ಎರಡನೆಯ ಗೃಹೀತವಾಕ್ಯ ಮೊದಲನೆಯ ಗೃಹೀತವಾಕ್ಯದಲ್ಲಿನ ಪರಿಣಾಮಾಂಗಗಳನ್ನು ಪರ್ಯಾಯಾತ್ಮಕವಾಗಿ ನಿರಾಕರಿಸುತ್ತದೆ. ಅನುಮಿತಿ ಮೊದಲನೆಯ ವಾಕ್ಯದಲ್ಲಿನ ಕಾರಣಾಂಗಗಳನ್ನು ಪರ್ಯಾಯಾತ್ಮಕವಾಗಿ ನಿರಾಕರಿಸುತ್ತದೆ.

	ದ್ವೈಧ ಅನುಮಾನ ಅನೇಕವೇಳೆ ಇತರರನ್ನು ವಾದದಲ್ಲಿ ಸೋಲಿಸುವುದಕ್ಕೆ ಉಪಯೋಗವಾಗುತ್ತದೆ; ಆದ್ದರಿಂದ ಅನೇಕ ವೇಳೆ ಅದು ದೋಷಪೂರಿತವಾಗಿರುತ್ತದೆ. ಈ ದೋಷಗಳನ್ನು ತೋರಿಸಿ ದ್ವೈಧವನ್ನು ವಿರೋಧಿಸಬಹುದು. ಹೀಗೆ ಮಾಡುವುದಕ್ಕೆ ಮೂರು ಮಾರ್ಗಗಳನ್ನು ತಾರ್ಕಿಕರು ಸೂಚಿಸಿದ್ದಾರೆ.

ಮೊದಲನೆಯ ಗೃಹೀತವಾಕ್ಯದಲ್ಲಿನ ಪರಿಣಾಮಾಂಗಗಳು ಅವುಗಳ ಕಾರಣಾಂಗಗಳಿಂದ ಪರಿಣಮಿಸುವುದಿಲ್ಲವೆಂದು ತೋರಿಸಿ, ಅನುಮಿತಿ ತಪ್ಪೆಂದು ಹೇಳುವುದು. ಇದಕ್ಕೆ ದ್ವೈಧದ ಎರಡು ಕೊಂಬುಗಳನ್ನೂ ಹಿಡಿದು ಸೋಲಿಸುವುದು ಎಂದು ಹೆಸರು.

ಎರಡನೆಯ ಗೃಹೀತವಾಕ್ಯದಲ್ಲಿನ ಎರಡು ಪರ್ಯಾಯಗಳು ಮೂರನೆಯ ಮಧ್ಯಮ ಮಾರ್ಗಕ್ಕೆ ಎಡೆಬಿಟ್ಟಿರುವುದೆಂದು ತೋರಿಸಿ, ಅನುಮಿತಿ ತಪ್ಪೆಂದು ಹೇಳುವುದು. ಇದಕ್ಕೆ ದ್ವೈಧದ ಎರಡು ಕೊಂಬುಗಳ ನಡುವೆ ತೂಗುವುದು ಎಂದು ಹೆಸರು.

ಮೊದಲನೆಯ ಗೃಹೀತವಾಕ್ಯದಲ್ಲಿನ ಪರಿಣಾಮಾಂಗಗಳನ್ನು ನಿಷೇಧಿಸಿ, ನಿಷೇಧ ರೂಪದಲ್ಲಿನ ಎರಡನೆಯ ಪರಿಣಾಮಾಂಗವನ್ನು ಮೊದಲನೆಯ ಪರಿಣಾಮಾಂಗವನ್ನು ಮೊದಲನೆಯ ಪರಿಣಾಮಾಂಗದ ಸ್ಥಳದಲ್ಲಿಯೂ ನಿಷೇಧ ರೂಪದಲ್ಲಿನ ಮೊದಲನೆಯ ಪರಿಣಾಮಾಂಗವನ್ನು ಎರಡನೆಯ ಪರಿಣಾಮಾಂಗದ ಸ್ಥಳದಲ್ಲಿಯೂ ಉಪಯೋಗಿಸುವುದು ಮತ್ತು ಅದರ ಆಧಾರದ ಮೇಲೆ ಗೃಹೀತ ದ್ವೈಧದ ಅನುಮಿತಿಗೆ ವಿರುದ್ಧವಾದ ಅನುಮಿತಿಯನ್ನು ಪಡೆಯುವುದು. ಪ್ರತಿವಾದದ ಆಧಾರದ ಮೇಲೆಯೇ ಅದನ್ನು ಸುಳ್ಳುಮಾಡುವ ಈ ಖಂಡನಾ ವಿಧಾನವನ್ನು ಇಂಗ್ಲಿಷ್‍ನಲ್ಲಿ ರಿಬಟಲ್ ಎನ್ನುವರು.

	ಭಾರತೀಯ ತತ್ತ್ವಶಾಸ್ತ್ರದಲ್ಲಿ ಚಾರ್ವಾಕದರ್ಶನದ ಹೊರತು ಮಿಕ್ಕೆಲ್ಲ ದರ್ಶನಗಳೂ ನಿಗಮನ ತರ್ಕವನ್ನು ಒಪ್ಪುತ್ತವೆ. ನಿಗಮನ ತರ್ಕವನ್ನು ಅನುಮಾನ ಪ್ರಮಾಣವೆಂದು ಕರೆಯುತ್ತಾರೆ. ಪ್ರಮಾಣ ಎಂದರೆ ಸರಿಯಾದ ಜ್ಞಾನ; ಪ್ರಮಾಣ ಎಂದರೆ ಸರಿಯಾದ ಜ್ಞಾನವನ್ನು ಪಡೆಯುವ ಬಗೆ. ಅನುಮಾನ ಸರಿಯಾದ ಜ್ಞಾನವನ್ನು ಪಡೆಯುವ ಒಂದು ಕ್ರಮ ಅಥವಾ ವಿಧಾನ. ಆದ್ದರಿಂದಲೇ ಅದನ್ನು ಪ್ರಮಾಣವೆನ್ನುತ್ತಾರೆ. ಅನುಮಾನವೆಂದರೆ ಸಂಶಯವಿಲ್ಲ. ಅದು ತಾರ್ಕಿಕವಾಗಿ ನಿಸ್ಸಂಶಯವಾದ ಜ್ಞಾನವನ್ನು ಕೊಡಬಲ್ಲ ಒಂದು ನಿರ್ದಿಷ್ಟಪ್ರಮಾಣ. ಅನುಮಾನದಲ್ಲಿ ಎರಡು ವಿಧ; ಸ್ವಾರ್ಥಾನುಮಾನ ಮತ್ತು ಪರಾರ್ಥಾನುಮಾನ. ಸ್ವಾರ್ಥಾನುಮಾನವೆಂದರೆ ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಉಂಟಾಗುವ, ಆದರೆ ಬೇರೆಯವರಿಗೆ ಸಂಸರ್ಗಿಸದಿರುವ ಅನುಮಾನ. ಪರಾರ್ಥಾನುಮಾನವೆಂದರೆ, ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಉಂಟಾಗುವುದೇ ಅಲ್ಲದೆ ಇತರರಿಗೂ ಸಂಸರ್ಗಿಸಲ್ಪಡುವ ಅನುಮಾನ.

	ಮೊಟ್ಟ ಮೊದಲಿಗೆ ಅನುಮಾನ ಪ್ರಮಾಣವನ್ನು ಕುರಿತು ದೀರ್ಘವಾದ ನಿರೂಪಣೆ ಗೌತಮರ ನ್ಯಾಯದರ್ಶನದಲ್ಲಿ ಕಂಡುಬರುತ್ತದೆ. ಅನುಮಾನ ಪ್ರಮಾಣದಲ್ಲಿ ಐದು ಅವಯವಗಳನ್ನು ಅವರು ನಿರೂಪಿಸಿ ಅನುಮಾನವನ್ನು ಪಂಚಾವಯವಿ ಎಂದು ಕರೆದಿದ್ದಾರೆ. ಈ ಐದು ಅವಯವಗಳು ಈ ರೀತಿ ಇವೆ: 1. ಪ್ರತಿಜ್ಞಾ- ಆ ಬೆಟ್ಟದಲ್ಲಿ ಬೆಂಕಿಯಿದೆ. 2. ಹೇತು- ಏಕೆಂದರೆ ಅದರಲ್ಲಿ ಹೊಗೆಯಿದೆ. 3. ಉದಾಹರಣೆ- ಹೊಗೆಯಿದ್ದೆಡೆಯಲ್ಲೆಲ್ಲ ಬೆಂಕಿಯಿರುತ್ತದೆ, ಒಲೆಯಲ್ಲಿದ್ದಂತೆ. 4. ಉಪನಯ- ಇಂದು ಅದೇ ರೀತಿಯೇ ಇದೆ. 5. ನಿಗಮನ- ಆದ್ದರಿಂದ ಆ ಬೆಟ್ಟದಲ್ಲಿ ಬೆಂಕಿಯಿದೆ.

	ಈ ಅವಯವಗಳಲ್ಲಿ ಪುನರಾವೃತ್ತಿಯಿದೆ ಎಂದು ಅದ್ವೈತ ವೇದಾಂತ ಅಭಿಪ್ರಾಯ ಪಡುತ್ತದೆ. ಭಾರತೀಯ ತತ್ತ್ವಶಾಸ್ತ್ರದ ಪ್ರಕಾರ ಪುನರಾವೃತ್ತಿ ಒಂದು ದೋಷವೇ ಸರಿ. ಒಂದು ವಿಷಯವನ್ನು ಎಷ್ಟು ಕಡಿಮೆ ಮಾತುಗಳಲ್ಲಿ ಹೇಳಬಹುದೋ ಅಷ್ಟು ಕಡಿಮೆ ಮಾತುಗಳಲ್ಲಿ ಪುನರಾವೃತ್ತಿಯಿಲ್ಲದೆ ಹೇಳಬೇಕು; ಇದಕ್ಕೆ ಲಾಘವನ್ಯಾಯವೆನ್ನುತ್ತಾರೆ. ಲಾಘವನ್ಯಾಯವನ್ನು ಅನ್ವಯಿಸಿ ಅದ್ವೈತ ವೇದಾಂತ ಮೇಲೆ ಹೇಳಿದ ನೈಯಾಯಿಕರ ಪಂಚಾಯವಗಳಲ್ಲಿ, ಉಪನಯವನ್ನು ಕೈಬಿಡುತ್ತದೆ ಮತ್ತು ಪ್ರತಿಜ್ಞಾ ನಿಗಮನಗಳನ್ನು ಒಂದು ಮಾಡಿ ಅನುಮಾನದಲ್ಲಿನ ಅವಯವಗಳನ್ನು ಮೂರಕ್ಕೆ ಸಂಕ್ಷಿಪ್ತಗೊಳಿಸುತ್ತದೆ.

	ವಿಶಿಷ್ಟಾದ್ವೈತ ವೇದಾಂತವೂ ಅದ್ವೈತ ವೇದಾಂತದಂತೆಯೇ ಅನುಮಾನದಲ್ಲಿ ಮೂರು ಅವಯವಗಳನ್ನು ಒಪ್ಪುತ್ತದೆ. ಆದರೆ ದ್ವೈತ ವೇದಾಂತ ಅವಯವಗಳ ಸಂಖ್ಯೆಯನ್ನು ನಿರ್ದಿಷ್ಟಗೊಳಿಸುವುದಿಲ್ಲ. ಅರ್ಥಮಾಡಿ ಕೊಳ್ಳುವವನ ಬುದ್ಧಿಶಕ್ತಿಯನ್ನು ಅವಲಂಬಿಸಿ ಅವಯವಗಳ ಸಂಖ್ಯೆ ಮೂರಾಗಬಹುದು, ಎರಡಾಗಬಹುದು, ಅಥವಾ ಒಂದೇ ಆಗಬಹುದು. ಎಂದರೆ, ಮೂರು ಅವಯವಗಳನ್ನೂ ಅಭಿವ್ಯಕ್ತಗೊಳಸಿಸಲೇಬೇಕೆಂಬ ನಿಯಮವೇನೂ ಇಲ್ಲ. ಒಂದು ಅಥವಾ ಎರಡನ್ನು ಮಾತ್ರ ಅಭಿವ್ಯಕ್ತಗೊಳಿಸಿದರೂ ಉಳಿದದ್ದು ಅರ್ಥವಾಗಿ ಅನುಮಾನ ಪ್ರಮಾಣ ಪೂರ್ಣವಾಗುತ್ತದೆ.
ಹೆಚ್ಚಿನ ವಿವರಗಳಿಗೆ (ನೋಡಿ- ತರ್ಕಶಾಸ್ತ್ರ-(ಪಾಶ್ಚಾತ್ಯ)).			
	(ಜಿ.ಎಸ್.ಆರ್‍ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ